19 May, 2010

ಕನ್ನಡ ಸಂಸ್ಕೃತಿ : ಒಂದು ಚಿಂತನೆ

"ನಾವು ನಿಂತ ನೆಲಕ್ಕೆ, ಅದರ ಚರಿತ್ರೆಗೆ, ಪುರಾಣಕ್ಕೆ ಮತ್ತು ಪರಂಪರೆಗೆ ನಾವು ಸ್ಪಂದಿಸಲಾರದವರಾಗಿದ್ದೇವೆ. ನಮಗೆ ನಮ್ಮ ಚರಿತ್ರೆ ಗೊತ್ತಿಲ್ಲ, ಪುರಾಣ ಗೊತ್ತಿಲ್ಲ, ಕಲೆ ಗೊತ್ತಿಲ್ಲ, ಸಂಸ್ಕೃತಿಯೂ ಗೊತ್ತಿಲ್ಲ. ಹೀಗೆ ಗೊತ್ತಿಲ್ಲದಿರುವುದು ಒಂದು ನಷ್ಟವೆಂದೂ ಗೊತ್ತಿಲ್ಲ!"

ಜಿ.ಎಸ್. ಶಿವರುದ್ರಪ್ಪನವರ "ಯಾವುದೂ ಸಣ್ಣದಲ್ಲ" ಗದ್ಯ ಸಂಕಲನದಲ್ಲಿ ಇರುವ "ಕನ್ನಡ ಸಂಸ್ಕೃತಿ : ಒಂದು ಚಿಂತನೆ " ಲೇಖನದಿಂದ ಈ ಮೇಲಿನ ವೇದನೆಯ ಮಾತುಗಳನ್ನು ಸ್ಮರಿಸಿದ್ದೇನೆ.

ಇದನ್ನು ಓದಿದಾಗ ನಿಮಗೇನು ತೋಚುತ್ತದೆ ?
ಚರಿತ್ರೆ, ಪುರಾಣ, ಪರಂಪರೆ, ಸಂಸ್ಕೃತಿ - ಇವೆಲ್ಲ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಪ್ರಾಚೀನ ವಿಷಯಗಳಾಗಿ ಹೋಗಿವೆ ಎಂದು ಅನಿಸಬಹುದು. ಇವುಗಳಿಗೆ ಈ ಗಣಕಗಳ ಯುಗದಲ್ಲಿ ಏನೂ ಮಹತ್ವವಿಲ್ಲವೆಂದು ಭಾವಿಸಿ ನಮ್ಮಲ್ಲಿ ಬಹಳಷ್ಟು ಜನ ಕೃತಕ ಜೀವನವನ್ನು ನಡೆಸುತಿದ್ದೇವೆ.

ಆದರೆ ನಮ್ಮ ಬೇರುಗಳಾದ ಕಲೆ, ಪರಂಪರೆ, ಸಂಸ್ಕೃತಿಗಳನ್ನು ಮರೆತು, ಪಾಶ್ಚಿಮಾತ್ಯ ಅಥವೆ ಇತರೆ ಕಲಾಚಾರಗಳನ್ನು ನಮ್ಮದೇ ಎಂದು ಭಾವಿಸಿ ಹೆಮ್ಮೆಯಿಂದ ಅನುಸರಿಸಿ ನಡೆದು, ಈ ದಿನ, ನಮ್ಮ ಸಂಸ್ಕೃತಿಯ ಮೆರುಗು ಕುಂದಿಹೋಗುತ್ತಿದೆ. ಜೊತೆಯಲಿ, ನಮ್ಮ ವ್ಯಕ್ತಿತ್ವಕ್ಕೆ ಗಣನೀಯ ತತ್ವವಿಲ್ಲದೆ, ಅದು ಹರಿಯುವ ನೀರಿನಲ್ಲಿ ಕೊಚ್ಚಿಹೋಗುವ ಕಸದಂತೆ ಎಲ್ಲೆಲ್ಲೂ ಹರಿಯುತ್ತಲಿದೆ.

ಆಂಗ್ಲದಲ್ಲಿ "identity crisis" ಅಥವ "ವ್ಯಕ್ತಿತ್ವ ಬಿಕ್ಕಟ್ಟು" ಎಂಬ ಕಳವಳವು ನಮ್ಮೆಲರನ್ನೂ ಒಂದಲ್ಲಾ ಒಂದು ರೂಪದಲ್ಲಿ ಕಾಡುತ್ತಿದೆ. ಇತರೆ ಕಲಾಚರಗಳನ್ನು ಪ್ರಯತ್ನಿಸುವುದರಲ್ಲಿ ಏನೂ ತಪಿಲ್ಲ, ಆದರೆ ನಮ್ಮ ಸ್ವಂತ ಸಂಸ್ಕೃತಿಯನ್ನು ಮರೆತು ಅವುಗಳನ್ನು ಅಳವಡಿಸಲು ಯತ್ನಿಸುವುದೇ ದೊಡ್ಡ ತಪ್ಪು.

ಹೀಗೂ ಇಲ್ಲದೆ ಹಾಗೂ ಇಲ್ಲದೆ, ಇಂದಿನ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಗಾಢವಾದ ಗೊಂದಲದಲ್ಲಿ ಸಿಲುಕಿ, ಅಸಮಾಧಾನ ಹಾಗು ಕೃತಕತೆಯ ಜೀವನದಲ್ಲಿ ಸೋತು; ಸೋತರೂ ಗೆದ್ದದಂತೆ ನಟಿಸಿ, ತನ್ನನ್ನು ತಾನೇ ವಂಚಿಸಿಕೊಂಡು ಬಾಳುತ್ತಿರುವ ಜನರು ಹಲವಾರು.

"ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕುವೆಂಪುರವರ ಮಾತುಗಳು ನಮ್ಮ ಮೆದುಳಿನಲ್ಲಿ ಸದಾ ಪ್ರತಿಧ್ವನಿಸಿ, ನಾವು ನಮ್ಮ ಬೇರುಗಳನ್ನು ಮರೆಯದೆ, ನಮ್ಮ ಕಲಾಚಾರವನ್ನು ಬಿಡದೆ, ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುವಂತೆ ಬಾಳಬೇಕು. ಇದು ನಮ್ಮೆಲ್ಲರ ಕರ್ತವ್ಯ ಹೌದು, ಅದಕ್ಕಿಂತಲೂ ಮುಖ್ಯವಾಗಿ ನಾವು ಒಂದು ಗುಣಮಟ್ಟದ ಜೀವನ ನಡೆಸಲು ಬಹು ಅಗತ್ಯವಾದ ಮೂಲ ತತ್ವ.

No comments:

Post a Comment

LinkWithin

Related Posts with Thumbnails