18 July, 2010

ವಿದ್ಯಾರ್ಥಿಗಳು ಮಾಡಿದ ಭಾರತದ ಮೊಟ್ಟ ಮೊದಲ ಪೀಕೊ ಉಪಗ್ರಹ - ಸ್ಟುಡಸ್ಯಾಟ್

" ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು", ಎಂಬ ಗಾದೆ ಮಾತು ಸ್ಟುಡಸ್ಯಾಟ್ ಉಪಗ್ರಹಕ್ಕೆ ಹೊಂದುತ್ತದೆ. ಏಕೆಂದರೆ, ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಿರುವ ಉಪಗ್ರಹಗಲ್ಲಿಯೇ ಇದು ಅತಿ ಸಣ್ಣದು. ಸ್ಟುಡಸ್ಯಾಟ್ ಕೇವಲ ೧ ಕೆಜಿ ತೂಕವಿದ್ದು, ಸುಮಾರು ೫೦ ಲಕ್ಷ ವೆಚ್ಚದಲ್ಲಿ ಮಾಡಲ್ಪಟ್ಟಿದೆ.

ಇದರ ಮತ್ತೊಂದು ಬಹು ಮುಖ್ಯವಾದ ಗುಣವೆಂದರೆ, ಇದು ಸ್ನಾತಕಪೂರ್ವದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ. ಸ್ಟುಡಸ್ಯಾಟ್ ತಂಡದಲ್ಲಿ ಸುಮಾರು ೪೦ ವಿದ್ಯಾರ್ಥಿಗಳು, ಭಾರತದ ಹಲವು ರಾಜ್ಯಗಳಿಂದ ಕೂಡಿ ಮಾಡಿದ್ದರೆ. ಬೆಂಗಳೂರಿನಿಂದ ೪, ಹೈದರಾಬಾದಿನಿಂದ ೩, ನಾಗಪುರದಿಂದ ೧, ಹಾಗು ಪೂನೆಯಿಂದ ೧ ಕಾಲೇಜು, ಒಂದುಗೂಡಿ ಈ ಉಪಗ್ರಹವನ್ನು ಮಾಡಿ ಇಸ್ರೋಗೆ ಕಳೆದ ತಿಂಗಳು ಕರ್ನಾಟಕದ ರಾಜ್ಯಪಾಲರ ಸಮ್ಮುಖದಲ್ಲಿ ನಡೆದ ಒಂದು ಸಮಾರಂಭದಲ್ಲಿ ಇಸ್ರೋ ಗಣ್ಯರಿಗೆ  ಒಪ್ಪಿಸಲಾಯಿತು.

ಸ್ಟುಡಸ್ಯಾಟ್-ಅನ್ನು ಕಳೆದ ವಾರ, ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಹಾರಿಸಲಾದ ಪಿಎಸ್ಎಲ್ ವಿ ರಾಕೆಟ್ನಲ್ಲಿ ಹೊಯ್ದು, ಭೂಮಿಯಿಂದ ೬೪೦ ಕಿಮ ಎತ್ತರದಲ್ಲಿ, ಭೂಮಿಯನ್ನು ಸುತ್ತು ಹೋಗಲು ಬಿಡಲಾಗಿದೆ.  ಈ ಉಪಗ್ರಹವು ಸಣ್ಣದಾದರೂ, ಇನ್ನಿತರೆ ದೊಡ್ಡ ಉಪಗ್ರಹಗಳು ಹೊಂದಿರುವ ಎಲ್ಲಾ ಯಂತ್ರಾಂಶಗಳನ್ನೂ ಇನ್ನೂ ಸಣ್ಣ ಗಾತ್ರದಲ್ಲಿ ಹೊಂದಿದೆ. ಸ್ಟುಡಸ್ಯಾಟ್-ನಲ್ಲಿ ಒಂದು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಟುಡಸ್ಯಾಟ್- ನ ಈ ಕ್ಯಾಮೆರಾ, ಭೂಮಿಯನ್ನು ಸುತ್ತು ಹೋಗುವಾಗ, ಚಿತ್ರಗಳನ್ನು ತೆಗೆದು, ಭೂಮಿಗೆ ಕಳುಹಿಸುತ್ತದೆ. ಈ ಶ್ರೇಣಿಯ ಉಪಗ್ರಹಗಳಲ್ಲಿ, ಅತ್ಯುತ್ತಮ ಚಿತ್ರಗಳನ್ನು ಸ್ಟುಡಸ್ಯಾಟ್ ತೆಗೆಯುವ ಸಾಮರ್ಥ್ಯವಿದೆ.


ಸ್ಟುಡಸ್ಯಾಟ್ ಉಪಗ್ರಹವು ಹಲವು ವಿಭಾಗಗಳನ್ನು ಒಳಗೊಂಡಿದೆ. ಅವುಗಳು ಪ್ರತ್ಯೇಕ ಕೆಲಸಗಳನ್ನು ನಿರ್ವಹಿಸುತ್ತವೆ. ಈ ಎಲ್ಲಾ ವಿಭಾಗಗಳನ್ನು ಒಂದು ಸಣ್ಣ ವಿದ್ಯಾರ್ಥಿ ತಂಡವು ಮಾಡಿದೆ.

ಸ್ಟುಡಸ್ಯಾಟ್ ಬಾಹ್ಯಾಕಾಶದಿಂದ ತೆಗೆಯುವ ಭೂಮಿಯ ಚಿತ್ರಗಳನ್ನು ಸ್ಪರ್ಶತಂತು ಅಥವ ಅಂಟೆನದ ಮೂಲಕ ರೇಡಿಯೋ ತರಂಗಗಳನ್ನು ಬಳಸಿ ಬೆಂಗಳೂರಿನಲ್ಲಿರುವ ನಿಟ್ಟೆ ಕಾಲೇಜಿನ ಉಪಗ್ರಹ ಸಂಪರ್ಕ ಕೇಂದ್ರದಲ್ಲಿ ಸೆರೆ ಹಿಡಿಯಬಹುದು. ಈ ತರಂಗಗಳಲ್ಲಿ ಬರುವ ಮಾಹಿತಿಯನ್ನು ಪರಿಶೀಲಿಸಿ ಚಿತ್ರವನ್ನು ಮರು ಸೃಷ್ಟಿಸಬಹುದು.

ಸ್ಟುಡಸ್ಯಾಟ್ ಸೂರ್ಯನ ಬೆಳಕನ್ನು ವಿದ್ಯುತ್ತಾಗಿ ಪರಿವರ್ತಿಸಿ, ಬ್ಯಾಟರಿಗಳಲ್ಲಿ ಶೇಖರಿಸಿ, ತನ್ನ ಕಾರ್ಯ-ಚಟುವಟಿಕೆಗಳನ್ನು ನಡೆಸುತ್ತದೆ. ಸ್ಟುಡಸ್ಯಾಟ್ ಸುಮಾರು ಒಂದು ಲೀಟರ್ನಷ್ಟು ಗಾತ್ರವಿರುವುದರಿಂದ, ಹೆಚ್ಚು ವಿದ್ಯುತ್ ಉತ್ಪನ್ನಗೊಳಿಸಲು ಸಾಧ್ಯವಾಗುವಿದಿಲ್ಲ. ಇರುವಷ್ಟು ವಿದ್ಯುತ್ತನ್ನು  ಸರಿಯಾಗಿ ಬಳಸಿಕೊಂಡು ಉಪಗ್ರಹವು ತನ್ನ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸಬೇಕು. ಇಂತಹ ವಿನ್ಯಾಸ ಮಾಡುವುದು ಈ ವಿದ್ಯಾರ್ಥಿ ತಂಡಕ್ಕೆ ಒಂದು  ದೊಡ್ಡ ಸವಾಲಾಗಿತ್ತು.


ಸ್ಟುಡಸ್ಯಾಟ್-ನ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಲು, ಉಪಗ್ರಹದಲ್ಲಿ ಒಂದು ಇಲೆಕ್ಟ್ರಾನಿಕ್ ಮೆದುಳನ್ನು  ವಿದ್ಯಾರ್ಥಿಗಳು ಅಳವಡಿಸಿದ್ದಾರೆ. ಈ ಮೆದುಳು ಉಪಗ್ರಹದ ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಂತ್ರಿಸಿ, ಸರಿಯಾದ ನಿರ್ಣಯಗಳನ್ನು ತೆಗೆಯುವ ಹಾಗೆ ಇದನ್ನು ಸೃಷ್ಟಿಸಲಾಗಿದೆ. ಇದನ್ನು ಒಂದು ಸಣ್ಣ ಕಂಪ್ಯೂಟರ್ ಎಂದೇ ಕರೆಯಬಹುದು. 

ಈ ಉಪಗ್ರಹವನ್ನು  ಮಾಡಿದ ವಿದ್ಯಾರ್ಥಿಗಳು  ಮತ್ತು ಕಾಲೇಜುಗಳ ತಂಡದ ಮತ್ತೊಂದು ಪ್ರಶಂಸೀಯ ಗುಣವೆಂದರೆ, ಇದು ಯಾವುದೇ ಒಂದು ಕಾಲೇಜಿನಿಂದ ಮಾಡಲಾಗಲ್ಲಿಲ್ಲ. ಸುಮಾರು ಹತ್ತು ಕಾಲೇಜುಗಳ ವಿದ್ಯಾರ್ಥಿಗಳು, ಕಾಲೇಜುಗಳ ಸಾಮೂಹಿಕ ಆರ್ಥಿಕ ನೆರವಿನಿಂದ ೫೦ ಲಕ್ಷದಷ್ಟು ವೆಚ್ಚವನ್ನು ಶೇಖರಿಸಿ, ಕೂಡಿ ಈ ಉಪಗ್ರಹವನ್ನು ಸೃಷ್ಟಿಸಿದರು. ಇದು ಯಾವುದೇ ಒಂದು ಕಾಲೇಜಿನ ಕೆಲಸ ಎಂದು ಹೇಳಲಾಗದು; ಎಲ್ಲಾ ಕಾಲೇಜುಗಳೂ ಒಕ್ಕೂಡಿ, ಇಂತಹ ಒಂದು ವಿಸ್ಮಯದ ಕೆಲಸವನ್ನು ೪೦ ವಿದ್ಯಾರ್ಥಿಗಳ ಮೂಲಕ ಮಾಡಿದ್ದಾರೆ.

ಇಂತಹ ಒಂದು ಚಟುವಟಿಕೆ, ನಮ್ಮ ದೇಶದ ಯುವ ಜನಾಂಗಕ್ಕೆ ಒಂದು ಮಾದರಿಯೇ ಹೌದು. ನಾವು ಒಂದು ಕೂಡಿ, ಏನೇ ಕೆಲಸವನ್ನು ತೆಗೆದೊಕೊಂಡರೂ, ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಬಹುದು ಎಂಬುದರ ಉದಾಹರಣವೆ ಸ್ಟುಡಸ್ಯಾಟ್.

"ನಮ್ಮ ಕಣ್ಣುಗಳು ಆಕಾಶವನ್ನು ನೋಡುತ್ತಿಲ್ಲ,
ಆದರೆ, ಅದನ್ನೂ ದಾಟಿ ನಾಟಿದ್ದೇವೆ ನಮ್ಮ ನಿಟ್ಟನ್ನು", ಎಂದು ಹೇಳುತ್ತಾ ಈ ವಿದ್ಯಾರ್ಥಿಗಳು ಆಕಾಶವೂ ಸೀಮೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಈ ತಂಡದ ಒಂದು ಸದಸ್ಯನಾಗಿ, ಸುಮಾರು ಎರಡೂವರೆ ವರ್ಷಗಳು ಕೆಲಸಮಾಡಿದ್ದೇನೆ ಎಂಬುದು ನನಗೆ ಅತಿ ಹೆಮ್ಮೆಯ ವಿಷಯ.

(ಒಂದು ಕನ್ನಡ ವಾರಪತ್ರಿಕೆಗೆ ಸ್ಟುಡಸ್ಯಾಟ್-ನ ಬಗ್ಗೆ ನಾನು ಬರೆದ ಒಂದು ಲೇಖನ)

No comments:

Post a Comment

LinkWithin

Related Posts with Thumbnails