25 November, 2011

ಹಾಗೆ ಸುಮ್ಮನೆ

ನನ್ನ ಬ್ಲಾಗಿನಲ್ಲಿ ಬರೆದಿರುವ ಎಲ್ಲಾ ಕನ್ನಡ ಲೇಖನಗಳೂ ಯಾವುದಾದರೊಂದು ತೀವ್ರತೆಯ ಸಂಗತಿಯ  ಬಗ್ಗೆ ಇದ್ದಿವೆ. ಈ ಲೇಖನದಲ್ಲಿ ಅಂತಹ ಯಾವುದೂ ತೀವ್ರ ವಿಷಯವನ್ನು ಮುಟ್ಟದೆ , ಹಾಗೆ ಸುಮ್ಮನೆ ಬರೆಯುವುದಾಗಿ ನಿರ್ಣಯಿಸಿದ್ದೇನೆ, ಹೇಗೆ ಮುಂದುವರಿಯುವುದು ಎಂದು ನೋಡೋಣ.

ನನ್ನ ಮಾತೃಭಾಷೆ ಯಾವುದೆಂದು ಕೇಳಿದಾಗ, ನನಗೆ ಎನು ಉತ್ತರ ಹೇಳುವುದೆಂದು ಇತ್ತೀಚಿಗೆ ಗೊಂದಲವಾಗುತ್ತಿದೆ. ಮೊದಲು ಮಾತೃ ಭಾಷೆ ಎಂದರೆ ಏನು ಎಂಬ ಸ್ಪಷ್ಟನೆಯ ಅವಶ್ಯಕತೆ ಇದೆ!

ನನ್ನ ತಾಯಿ ಮಾತನಾಡುವ ಭಾಷೆ ಮಾತೃಭಾಷೆಯೆ?
ನಾನು ಹುಟ್ಟಿದ ರಾಜ್ಯದ ಆಡುಭಾಷೆ ನನ್ನ ಮಾತೃಭಾಷೆಯೆ?
ಅಥವಾ, ನನ್ನ ಮೆದುಳು ಆಲೋಚನೆಗಳನ್ನು ಮಾಡುವ ಭಾಷೆ ನನ್ನ ಮಾತೃಭಾಷೆಯೆ?

ಈ ಗೊಂದಲದಿಂದ ಹೊರಬಾರದೆ, ನನ್ನ ಮಾತೃಭಾಷೆಯಾವುದೆಂದು ಪರಿಗಣಿಸುವುದು ಅಸಾಧ್ಯವೇ ಹೌದು. ಮೇಲಿನ ಮೂರೂ ವಿವರಣೆಗಳನ್ನು ಕುರಿತು ನಾನು ಒಂದು ಭಿನ್ನವಾದ ಉತ್ತರವನ್ನು ನೀಡಬಲ್ಲೆನು.

ನನ್ನ ತಾಯಿ ಮಾತನಾಡುವ ಭಾಷೆ ತಮಿಳು. ಈ ಕಾರಣ ತಮಿಳು ನನ್ನ ಮಾತೃಭಾಷೆ ಎಂದು ಹೇಳುವುದು ಸುಲಭವಲ್ಲ. ನನಗೆ ತಮಿಳು ಓದಲು, ಬರೆಯಲು ಬರುವುದಿಲ್ಲ - ಈಗ ಕಲಿಕೆಯಲ್ಲಿ ತೊಡಗಿದ್ದೆನೆ!

ನಾನು ಹುಟ್ಟಿದ ರಾಜ್ಯದ ಆಡುಭಾಷೆ ಕನ್ನಡ. ೧೨ ವರ್ಷಗಳ ಕಾಲ ವ್ಯಾಸಂಗ ನಡೆಸಿ, ಕನ್ನಡ ಸಾಹಿತ್ಯ, ಆ ಮೂಲಕ ಕರ್ನಾಟಕದ ಇತಿಹಾಸದ ತುಣುಕುಗಳನ್ನು ಮೆಲುಕು ಹಾಕಿದ್ದೇನೆ. ಈ ಕಾರಣ ಕನ್ನಡ ನನ್ನ ಮಾತೃಭಾಷೆ ಎಂದು ಹೇಳುವುದು ಅತಿ ತಕ್ಕದಾದ ಉತ್ತರವಾದರೆ,

ನನ್ನ ಮೆದುಳು ನಡೆಸುವ ಎಲ್ಲಾ ಆಲೋಚನೆಗಳು, ವಿಚಾರ-ವಿಮರ್ಷೆಗಳು, ಕಲ್ಪನೆ ಮತ್ತು ಅಭಿಪ್ರಾಯಗಳೆಲ್ಲವೂ ಆಂಗ್ಲದಲ್ಲಿಯೆ ನಡೆಯುತ್ತಿರುವುದು ಚಿಂತಾಜನಕವಾದ ಸಂಗತಿ! ಈ ಕಾರಣ ಆಂಗ್ಲ ನನ್ನ ಮಾತೃಭಾಷೆಯಾಗಲು ಸಾಧ್ಯವೆ?

ಆಲೋಚಿಸಬೇಕಾದ ವಿಷಯ ಹೌದು!

ಹಾಗೆ ಸುಮ್ಮನೆ ಎಂದು ಹೊರಟು, ಒಂದು ಕಷ್ಟಕರ ಸುಳಿಯಲ್ಲಿ ಸಿಲುಕಿಕೊಂದಿರುವಂತಿದೆ. ಆದರೂ, ಎಲ್ಲವೂ ನಡೆಯಲಿ, ಹಾಗೆ ಸುಮ್ಮನೆ!

No comments:

Post a Comment

LinkWithin

Related Posts with Thumbnails